top of page
Campus kids11.png

“ಅನ್ವೇಷಣಾ” ಎಂಬ ತರಗತಿಯಾಚೆಗಿನ ಜಗತ್ತು!

"ನಾವು ಈ ರಾಸಾಯನಿಕ ಉಂಟಾಗುವುದನ್ನು ಕಡಿಮೆ ಮಾಡಲು ಪ್ರಯತ್ನಿಸುವುದರ ಜೊತೆಗೆ ಅದು ಉಂಟಾಗದೆ  ಇರುವ ಮಾರ್ಗವನ್ನು ಕಂಡು ಹಿಡಿಯಬಹುದೇ?" 


ನಮ್ಮ ಅನ್ವೇಷಣಾ ತಂಡದ ವಿದ್ಯಾರ್ಥಿನಿಯು ಪ್ರಶ್ನಿಸಿದಾಗ ಅವಳ ಯೋಚನಾ ವೇಗಕ್ಕೆ ನಾನು ಬೆರಗಾದೆ.

"ಖಂಡಿತಾ ಮಾಡ್ಬಹುದು, ನಿನಗೆ ಆಸಕ್ತಿ ಇದೆಯೇ?" ಎಂದು ಕೇಳಿದಾಗ "ಹೌದು, ಯಾರೂ  ಈ ಆವಿಷ್ಕಾರ  ಮಾಡಿಲ್ಲವಲ್ಲ. ಪ್ರಯತ್ನಿಸಿ ನೋಡಲು ನನಗೆ ಆಸಕ್ತಿ ಇದ್ದೇ  ಇದೆ!" ಎಂದು ಉತ್ಸಾಹಭರಿತವಾಗಿ ಉತ್ತರಿಸಿದಳು. ಇದೇ ನಮ್ಮ "ಅನ್ವೇಷಣಾ" ಕಾರ್ಯಕ್ರಮದ ಗುರಿ. ಹೆಸರೇ ಹೇಳುವಂತೆ  ಇದು  ವೈಜ್ಞಾನಿಕ ಅನ್ವೇಷಣೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ. 


ree

ವಿಜ್ಞಾನದಲ್ಲಿ ಆಸಕ್ತಿ ಹಾಗೂ ಕುತೂಹಲ ಹೊಂದಿರುವ 9-12 ನೇ ತರಗತಿ ವಿದ್ಯಾರ್ಥಿಗಳನ್ನು ಸಂದರ್ಶನದ  ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು  ತಮ್ಮ  ಬೇಸಗೆ ರಜೆಯ ಎರಡು  ತಿಂಗಳುಗಳನ್ನು  ಪ್ರಯೋಗ ಸಂಸ್ಥೆಯ ಪ್ರಯೋಗಾಲಯದಲ್ಲಿ ಕಳೆಯುತ್ತಾರೆ. ಅವರ ಅಭಿರುಚಿಗೆ  ತಕ್ಕಂತೆ ಪ್ರಾಜೆಕ್ಟ್ಗಳನ್ನು  ಆಯ್ಕೆ  ಮಾಡಿ, ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ, ನವೀನ ಆವಿಷ್ಕಾರಗಳಿಗೆ ನಾಂದಿ ಹಾಡುತ್ತಾರೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅನ್ವೇಷಣಾ ಕಾರ್ಯಕ್ರಮ ಯಶಸ್ವಿಯಾಗಿ ನಾಲ್ಕನೇ  ವರುಷಕ್ಕೆ ಕಾಲಿರಿಸಿದೆ. ಇಲ್ಲಿಯವರೆಗೆ 9 ಸಂಶೋಧನೆಗಳು ಅಂತರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟಗೊಂಡಿರುವುದು, “ಆನ್ವೇಷಣಾ” ಕಾರ್ಯಕ್ರಮಕ್ಕೆ ಸಂದ ಗೌರವ.  


ree

ಆಯ್ಕೆಯಾದ ವಿದ್ಯಾರ್ಥಿಗಳು  ಗ್ರೀನ್ ಕೆಮಿಸ್ಟ್ರಿ ಅಡ್ವಾನ್ಸ್ಡ್ ಏಂಡ್ ಫoಕ್ಷನಲ್  ಮೆಟೀರಿಯಲ್ಸ್, ಅರ್ತ್ ಸೈನ್ಸ್, ವೆಲ್ನೆಸ್ ಹಾಗು ಫುಡ್ ಏಂಡ್ ಅಗ್ರಿಕಲ್ಚರ್   ಹೀಗೆ  ಯಾವುದಾದರೂ  ಒಂದು  ವಿಷಯವನ್ನು  ಆಯ್ಕೆ  ಮಾಡಿ ಅದರಲ್ಲಿ ಕಾರ್ಯ ನಿರತರಾಗುತ್ತಾರೆ. ಕಲಿತದ್ದನ್ನು ಉರು  ಹೊಡೆದು ಅಂಕಗಳನ್ನು  ಗಳಿಸುವುದು ಗುರಿಯಾಗಿರದೆ ಅದನ್ನು  ತಮ್ಮ ಕೌಶಲ್ಯ ಹಾಗು ವಿಜ್ಞಾನದಲ್ಲಿ ಔನ್ನತ್ಯ ಪಡೆಯಲು  ಬಳಸುತ್ತಾರೆ. ಅನುಭವಾತ್ಮಕ  ಕಲಿಕೆಗೆ ಒತ್ತು ನೀಡುವ "ಅನ್ವೇಷಣಾ", ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ  ಅರ್ಥ ಮಾಡಿಕೊಳ್ಳಲು  ಸಹಾಯ  ಮಾಡುತ್ತದೆ. ಅನ್ವೇಷಣಾ ಕಾರ್ಯಕ್ರಮವು ಕರ್ನಾಟಕದ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿರದೆ, ದೇಶದ ಎಲ್ಲೆಡೆಯ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶ ಒದಗಿಸಲಾಗಿದೆ. ಭಾಷೆ, ಪ್ರದೇಶ, ಲಿಂಗಭೇದವಿಲ್ಲದೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಂದು ತಂಡದಲ್ಲಿ ವಿವಿಧ ಪ್ರದೇಶದ, ವಿವಿಧ ಭಾಷೆಯ ವಿದ್ಯಾರ್ಥಿಗಳು ಇರುತ್ತಾರೆ. ಇದರಿಂದ  ಜಗತ್ತಿನ ಪರಿಚಯವೂ ವಿದ್ಯಾರ್ಥಿಗಳಿಗೆ ಲಭಿಸುತ್ತದೆ.   ವಿಜ್ಞಾನವನ್ನು ಕಲಿಯುವುದರ ಜೊತೆಗೆ, ಹೊಸ ವಾತಾವರಣವೂ  ಅವರಿಗೆ ಸಿಗುತ್ತಿದೆ. 


ree

ದುರ್ಗಮವಾದ ಪ್ರದೇಶದಿಂದ ಬಂದು, ಪ್ರಯೋಗಾಲಯ ಏನೆಂದು ಕೇಳರಿಯದ ವಿದ್ಯಾರ್ಥಿನಿಯೊಬ್ಬಳು "ಅನ್ವೇಷಣಾ" ಕಾರ್ಯಕ್ರದಲ್ಲಿ ಪಾಲ್ಗೊಂಡು, ತನ್ನ ಪ್ರಾಜೆಕ್ಟ್ ಅನ್ನು  ತುಂಬಿದ ಸಭೆಯಲ್ಲಿ  ಪ್ರಸ್ತುತ ಪಡೆಸಿ ಚಪ್ಪಾಳೆ ಗಿಟ್ಟಿಸಿ, ತಾನು ಯಾರಿಗೇನು ಕಡಿಮೆ! ಎಂದು ತೋರಿಸಿಕೊಟ್ಟದ್ದು ಹೆಮ್ಮೆಯ ಸಂಗತಿ. ಇಂತಹ ಯಶೋಗಾಥೆಗಳು ಹಲವಾರು. ಅನ್ವೇಷಣಾ ಕಾರ್ಯಕ್ರಮದಿಂದ  ಸಿಕ್ಕಿದ ಅನುಭವ  ಮುಂದೆ  ಅವಳು  ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಕವಾಗಬಹುದು, ತನ್ನಂತೆ ಇರುವ ಇನ್ನೊಬ್ಬರನ್ನು ಪ್ರೇರೇಪಿಸಲೂಬಹುದು!. ವೈಯಕ್ತಿಕವಾಗಿ ಹೇಳಬೇಕೆಂದರೆ, ನಾನೂ ಸಹ ಸರಕಾರ  ಅನುದಾನಿತ  ಶಾಲೆಯಲ್ಲಿ ಕಲಿತವಳು. ವಿದ್ಯಾರ್ಥಿನಿ  ಆಗಿದ್ದಾಗ ಇಂಥಹಾ ಅವಕಾಶಗಳು ನನಗೂ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು  ಎಂದು ಹಲವು  ಬಾರಿ ಅನಿಸಿದ್ದಿದೆ. ಆದರೆ ಈಗ ಸಹ ಸಂಶೋಧಕಿ ಆಗಿ ವಿದ್ಯಾರ್ಥಿಗಳನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ಯಾವತ್ತೂ ಮರೆಯಲಾಗದ ಸಂಗತಿ. ಕಲಿಯುವ ಪ್ರಕ್ರಿಯೆ ಯಾವತ್ತೂ ಮುಗಿಯುವುದೇ ಇಲ್ಲ, ವಿದ್ಯಾರ್ಥಿಗಳಿಗೆ  ಕಲಿಸುತ್ತಾ  ನಾವು ಕೂಡಾ ಕಲಿಯುತ್ತಿದ್ದೇವೆ ಎಂಬುದಂತೂ ಸತ್ಯ.


ree

ಅಷ್ಟೇ ಅಲ್ಲದೇ, "ಅನ್ವೇಷಣಾ" ವಿದ್ಯಾರ್ಥಿಗಳ ಬೆಳವಣಿಗೆಯು ಪ್ರಶಂಸನೀಯ, ಮೊದಲಿಗಿದ್ದ ಅಳುಕು  ಮಾಯವಾಗಿ, ಮುಕ್ತವಾಗಿ  ಪ್ರಶ್ನೆ ಕೇಳುವ  ಹಂತಕ್ಕೆ  ಅವರು ತಲುಪಿದ್ದಾರೆ. ಆಧುನಿಕ ಉಪಕರಣಗಳನ್ನು ಎಗ್ಗಿಲ್ಲದೆ ಬಳಸಿ, ಅದರ ಫಲಿತಾಂಶವನ್ನು ವಿಶ್ಲೇಷಿಸುವ  ಹಂತಕ್ಕೆ ತಲುಪಿದ್ದಾರೆ. ಯಾಕೆ ಹೀಗೆ? ಎಂದು ಪ್ರಶ್ನಿಸುವುದಕ್ಕೂ ಕಾರಣ ಕೊಡುವುದಕ್ಕೂ ಸಮರ್ಥರಾಗಿದ್ದಾರೆ. ನಮ್ಮ ಪ್ರಯತ್ನಗಳು ಸಾರ್ಥಕವೆಂದು ಅನಿಸುವ ಕ್ಷಣ ಇದು. "ಬೆಳೆಯ ಸಿರಿ ಮೊಳಕೆಯಲ್ಲಿ" ಎಂಬಂತೆ ಈ ಪ್ರಾಯದಲ್ಲಿ  ಸಿಗುವ  ಅವಕಾಶಗಳು, ಹಾಗೂ ಮಾರ್ಗದರ್ಶನಗಳಿಂದ  ಮುಂದೆ  ವಿದ್ಯಾರ್ಥಿಗಳು   ಸಂಶೋಧಕರೋ  ವಿಜ್ಞಾನಿಗಳೋ  ಆಗಬಹುದು, ಹೊಸ ಆವಿಷ್ಕಾರಗಳ ಚುಕ್ಕಾಣಿ ಹಿಡಿಯಬಹುದು, ಮನುಕುಲಕ್ಕೆ ಒಳಿತನ್ನು ಮಾಡುವ ಏನನ್ನಾದರೂ ಕಂಡು ಹಿಡಿಯಲೂಬಹುದು. ಅಂತಹ ಆವಿಷ್ಕಾರಗಳಿಗೆ "ಅನ್ವೇಷಣಾ" ಕಾರ್ಯಕ್ರಮವು  ದಾರಿಯಾಗಲಿ  ಎಂಬುದೇ  ನಮ್ಮ  ಪ್ರಯೋಗ  ಸಂಸ್ಥೆಯ  ಹಾರೈಕೆ!   


ree

 

Asha. C. H 

Research Associate - Chemistry  

Prayoga Institute of Education Research

Comments


bottom of page